ಮೆನ್ಷೆವಿಕ್
ರಷ್ಯದಲ್ಲಿ ಸಂಸದೀಯ ಸರ್ಕಾರ ಹಾಗೂ ಇತರ ಪಕ್ಷಗಳ ಸಹಕಾರದ ಮೂಲಕ ಹಂತ ಹಂತವಾಗಿ ಸಂಪೂರ್ಣ ಸಮತಾವಾದವನ್ನು ಸ್ಥಾಪಿಸುವುದೇ ಮೇಲೆಂದು ನಂಬಿದ್ದವರು ಮೆನ್ಷೆವಿಕರು. ಇವರ ಅಭಿಪ್ರಾಯವನ್ನು ಮನ್ನಿಸದೇ ಹುಟ್ಟಿಕೊಂಡು ಪ್ರಬಲವಾದದ್ದೆ ಬಾಲ್ಷೆವಿಕರ ಪಕ್ಷ. ಹತ್ತೊಂಬತ್ತನೆಯ ಶತಮಾನದ ಅಂತ್ಯದಲ್ಲಿ ಮಾಕ್ರ್ಸ್‍ನ ಸಮತಾವಾದ ರಷ್ಯದಲ್ಲಿ ಪ್ರಚಾರಗೊಂಡು 1898ರಲ್ಲಿ ರಷ್ಯ ಸೊಷಿಯಲ್ ಡೆಮಾಕ್ರಟಿಕ್ ಲೇಬರ್ ಪಾರ್ಟಿ ಹುಟ್ಟಿಕೊಂಡಿತು. ಪ್ರಾರಂಭದಿಂದಲೇ ಇದರ ಅನುಯಾಯಿಗಳಲ್ಲಿ ಧ್ಯೇಯ, ಧೋರಣೆ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ಮೂಡಿದವು. 1903ರಲ್ಲಿ ಲಂಡನ್ನಿನಲ್ಲಿ ನಡೆದ ಸಮ್ಮೇಳನದಲ್ಲಿ ಉಗ್ರಗಾಮಿಗಳ ನಾಯಕ ಲೆನಿನ್‍ಗೂ ಮಿತಗಾಮಿಗಳ ನಾಯಕ ಮಾರ್ಟೋವಿಗೂ ಭಿನ್ನಾಭಿಪ್ರಾಯ ಉಂಟಾಗಿ ಉಗ್ರಗಾಮಿ ಬಾಲ್ಷೆವಿಕರು, ಮಿತಗಾಮಿ ಮೆನ್ಷೆವಿಕರು ಎಂದು ಎರಡು ಪಕ್ಷಗಳು ಹುಟ್ಟಿ ಪರಸ್ಪರ ವಿರೋಧ ಬೆಳೆದು 1912 ರಲ್ಲಿ ಎರಡು ಪಕ್ಷದವರೂ ಬೇರೆಯಾದರು.

	ಬಾಲ್ಷೆವಿಕರ ಅಭಿಪ್ರಾಯದಲ್ಲಿ ಪಾರ್ಟಿಯ ಪ್ರತಿಯೊಬ್ಬ ಸದಸ್ಯನೂ ಮಾಕ್ರ್ಸ್‍ನ ತತ್ತ್ವವನ್ನು ಸಂಪೂರ್ಣವಾಗಿ ಅಂಗೀಕರಿಸಿಬೇಕು; ಧ್ಯೇಯೆಸಾಧನೆಗೆ ತನ್ನ ಸರ್ವಸ್ವವನ್ನೂ ಒಪ್ಪಿಸಲು ಸಿದ್ಧನಿರಬೇಕು; ಪಕ್ಷದ ಕಲಾಪಗಳಲ್ಲಿ ಭಾಗವಹಿಸಬೇಕು; ಕ್ರಾಂತಿಯ ಹೋರಾಟದಲ್ಲಿ ಪಡೆಯ ಸೈನಿಕನಂತೆ ಶಿಸ್ತಿನಿಂದ ವರ್ತಿಸಬೇಕು. ಪಕ್ಷದ ಮೇಲ್ಮೆಗೆ ಜನಬಲ ಮುಖ್ಯವಲ್ಲ; ಧ್ಯೇಯದಲ್ಲಿ ಅಚಲ ನಂಬಿಕೆ, ಐಕ್ಯಮತ್ಯ, ಶಿಸ್ತು ಇವೆ ಇದರ ದಾಢ್ರ್ಯಕ್ಕೆ. ಅಭಿವೃದ್ಧಿಗೆ ಮೂಲ ಸ್ತಂಭಗಳು. ಸಮಾಜವಾದದ ರಾಜ್ಯನಿರ್ಮಾಣಕ್ಕೆ eóÁರ್‍ನ ನಿರಂಕುಶ ಪ್ರಭುತ್ವವೂ ಎಲ್ಲ ಶ್ರೇಣಿಗಳ ಬಂಡವಾಳಗಾರರೂ ವಿರೋಧಿಗಳು. ಸಮತಾತತ್ತ್ವವನ್ನು ಒಪ್ಪದೆ, ಪ್ರಜಾಪ್ರಭುತ್ವಕ್ಕಾಗಿ ಮಾತ್ರ ಹೋರಾಡುವ ಬಂಡವಾಳಗಾರರ ಸಂಘಗಳೊಡನೆ ಕೇವಲ ತಾತ್ಕಾಲಿಕವಾಗಿ ಸ್ನೇಹ ಬೆಳೆಸಬಹುದು; ಆದರೆ ಇವರೆಲ್ಲ ಕಾರ್ಮಿಕರ ಶತ್ರುಗಳೆಂಬುದನ್ನು ಮರೆಯಲಾಗದೆಂದು ಪ್ರಚಾರ ನಡೆಯಿತು.

	ಈ ವಿಚಾರಗಳಲ್ಲಿ ಮೆನ್ಷೆವಿಕರ ವಿರೋಧವಿತ್ತು. ಇವರ ಅಭಿಪ್ರಾಯ. ಧ್ಯೇಯ ಸಾಧನೆಗೆ ಪ್ರಥಮ ಅಡಚಣೆ ಜಾರ್‍ನ ನಿರಂಕುಶ ಪ್ರಭುತ್ವ. ಇದನ್ನು ಅಳಿಸಲು ದುಡಿಯುವ ಶ್ರೀಮಂತ ಹಾಗೂ ಮಧ್ಯಮ ಶ್ರೇಣಿಯವರ ಪಕ್ಷಗಳೊಡನೆ ಸಹಕರ, ನಿಕಟ ಸಂಬಂಧ ಅತ್ಯಗತ್ಯ. ಪ್ರಜಾಪ್ರಭುತ್ವ ರೂಢಮೂಲವಾದ ಮೇಲೆ ತಾನೆ ಬಂಡವಾಳಗಾರರನ್ನು ಮೂಲೆಗೊತ್ತರಿಸುವ ಕೆಲಸ. ತತ್ಕಾಲದಲ್ಲಿ, ಸಿದ್ಧಾಂತಪರರಾಗದೆ, ಕಾರ್ಮಿಕರಲ್ಲಿ ಸಹಾನುಭೂತಿಯುಳ್ಳವರನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಂಡು ಹೋರಾಡುವುದೇ ಜಾಣತನವೆಂಬುದು ಮೆನ್ಷೆವಿಕರ ವಾದವಾಗಿತ್ತು.

	ಬಾಲ್ಷೆವಿಕರು ಮೆನ್ಷೆವಿಕರು ತಮ್ಮ ತಮ್ಮ ವಾದ ಮುಂದಿಡುತ್ತಾ ರಾಜಕೀಯ ಹೋರಾಟದಲ್ಲಿ ತೊಡಗಿದರು. ಒಂದನೆಯ ಮಹಾಯುದ್ಧದ ಅಂತ್ಯದಲ್ಲಿ eóÁರ್‍ನ ಅಧಿಕಾರ ಕೊನೆಗೊಂಡಾಗ ಮಿತಗಾಮಿ ಪಕ್ಷದವರಲ್ಲೇ ಜನರಿಗೆ ಹೆಚ್ಚಿನ ವಿಶ್ವಾಸ ಬೆಳೆದುಬಂದರೂ ಬಾಲ್ಷೆವಿಕರಲ್ಲಿ ಕ್ರಾಂತಿಯ ಹುರುಪು, ಶಿಸ್ತು ಹೆಚ್ಚಾಗಿ ಅವರೇ ಬಲಾತ್ಕಾರವಾಗಿ ತಮ್ಮ ಅಧಿಕಾರವನ್ನು ಸ್ಥಾಪಿಸಿದರು. ಮೆನ್ಷೆವಿಕರ ಕೆಲವು ನಾಯಕರು ರಷ್ಯ ಬಿಟ್ಟು ಓಡಿ ಹೋಗಿ ಹೊರ ದೇಶಗಳಿಂದ ಕೆಲವು ಕಾಲ ತಮ್ಮ ಚಳಚಳಿ ನಡೆಸಿದರು.
								      (ಎಸ್.ವಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ